ನನ್ನ ಪ್ರೀತಿಯ ರಾಮು
Synopsis
“ನನ್ನ ಪ್ರೀತಿಯ ರಾಮು” ಒಂದು ಕಥೆಯಲ್ಲ… ಒಂದು ಇತಿಹಾಸ. ಗ್ರಾಮೀಣ ಸೊಗಡನ್ನು ನೋಡಲು ಬರುವ ಪ್ರವಾಸಿಗರ ಕಣ್ಣಿಗೆ ಬೀಳುವ ಒಂದು ಬೃಹತ್ ಸಮಾಧಿಯ ಹಿಂದಿನ ಇತಿಹಾಸವನ್ನು ಒಬ್ಬ ಇತಿಹಾಸಕಾರ ಪರಿಚಯಿಸುವುದರೊಂದಿಗೆ ಕಥೆ ಆರಂಭವಾಗುತ್ತದೆ. ಪೂಲಹಳ್ಳಿ ಗ್ರಾಮದ ಜ್ಯೋತಿ ತನ್ನ ಊರಿನ ಅಭಿವೃದ್ಧಿಗಾಗಿ ರಸ್ತೆ, ಶಾಲೆ, ಆಸ್ಪತ್ರೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುತ್ತಾಳೆ. ಆದರೆ ಅವಳ ಹೋರಾಟ ಭ್ರಷ್ಟ ರಾಜಕಾರಣಿಯ ದುರಾಸೆಗೆ ಅಡ್ಡಿಯಾಗುತ್ತದೆ. ಕೊನೆಗೆ ಜ್ಯೋತಿ ಹತ್ಯೆಯಾಗುತ್ತಾಳೆ. ತನ್ನ ಸಾವಿನ ಅಪಾಯವನ್ನು ಅರಿತಿದ್ದ ಅವಳು, ತನ್ನ ಸಾವಿಗೆ ಕಾರಣನಾದ ವ್ಯಕ್ತಿ ಹಾಗೂ ತನ್ನ ಕೊನೆಯ ಆಸೆಯನ್ನು ಒಂದು ಪತ್ರದಲ್ಲಿ ಬರೆದು ಬಿಡುತ್ತಾಳೆ. ಜ್ಯೋತಿಯ ಗಂಡ ಮಂಜು ಆ ಆಸೆಯನ್ನು ಈಡೇರಿಸಲು ಸಾಧ್ಯವಾಗದೆ ಮಾನಸಿಕವಾಗಿ ಕುಸಿದು, ಕುಡಿತಕ್ಕೆ ಬಲಿಯಾಗುತ್ತಾನೆ. ವರ್ಷಗಳ ನಂತರ ಆ ಪತ್ರ ರಾಮುವಿನ ಕೈ ಸೇರುತ್ತದೆ. ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಮು ತನ್ನದೇ ಆದ ಬುದ್ಧಿವಂತಿಕೆಯ ತಂತ್ರದ ಮೂಲಕ ಹಳ್ಳಿಯ ಅಭಿವೃದ್ಧಿಗಾಗಿ ಬಂದಿದ್ದ ಸರ್ಕಾರಿ ಹಣವನ್ನು ಯಾರು ನುಂಗಿದ್ದಾರೆ ಎಂಬುದನ್ನು ಹುಡುಕಲು ಆರಂಭಿಸುತ್ತಾನೆ. ಹೋರಾಟ ಮುಂದುವರಿದಂತೆ ರಾಮು ಭ್ರಷ್ಟ ರಾಜಕೀಯದ ಹಿಂದೆ ಅಡಗಿರುವ ದೊಡ್ಡ ಸಂಚನ್ನು ಪತ್ತೆಹಚ್ಚುತ್ತಾನೆ. ತನ್ನ ತಾಯಿಗೆ ನ್ಯಾಯ ಕೊಡಿಸುವುದರ ಜೊತೆಗೆ ದೇಶಕ್ಕೆ ಎದುರಾಗುವ ದೊಡ್ಡ ಅಪಾಯವನ್ನು ತಡೆಯಲು ಅವನು ತನ್ನ ಜೀವವನ್ನೇ ಪಣಕ್ಕಿಡುತ್ತಾನೆ. ಕೊನೆಯಲ್ಲಿ ಸಮುದ್ರದ ಮಧ್ಯೆ ನಡೆಯುವ ಮಹಾ ಸಂಹಾರದಲ್ಲಿ ರಾಮು ತನ್ನ ಪ್ರಾಣವನ್ನು ತ್ಯಾಗ ಮಾಡುತ್ತಾನೆ. ಆದರೆ ಅವನು ತನ್ನ ತಾಯಿಗೆ ನೀಡಿದ “ಉಡುಗೊರೆ” ಮತ್ತು ಅವನ ತ್ಯಾಗದ ನಿಜವಾದ ಅರ್ಥ ಪ್ರೇಕ್ಷಕರ ಮನಸ್ಸನ್ನು ಕಲುಕುತ್ತದೆ. ಕಥೆ ಮುಗಿದಿದೆ ಎಂದು ಭಾವಿಸುವ ಕ್ಷಣದಲ್ಲಿ ಇತಿಹಾಸಕಾರ ರಾಮುವಿನ ಅಸ್ತಿತ್ವದ ಒಂದೇ ಒಂದು ಕುರುಹಾದ ಹಳೆಯ ಟೇಬಲ್ ಮತ್ತು ಕುರ್ಚಿಯನ್ನು ತೋರಿಸುತ್ತಾನೆ. ಅದರ ಮೇಲೆ ಸಣ್ಣದಾಗಿ ಬರೆಯಲಾಗಿರುವ ಒಂದು ಹೆಸರು — “ವಿಕ್ರಮ್”. ಆ ಹೆಸರನ್ನು ಓದಿದ ಕ್ಷಣದಲ್ಲಿ ಇತಿಹಾಸಕಾರನೇ ಬೆಚ್ಚಿಬೀಳುತ್ತಾನೆ. ಅಲ್ಲಿಂದ ಮತ್ತೊಂದು ಇತಿಹಾಸದ ಬಾಗಿಲು ತೆರೆಯುತ್ತದೆ.
Description
“ತನ್ನ ತಾಯಿಯ ಸಾವಿನ ಹಿಂದಿರುವ ಭ್ರಷ್ಟ ರಾಜಕೀಯದ ಸತ್ಯವನ್ನು ಅರಿಯುವ ಒಬ್ಬ ಮಗ, ತಾಯಿಗೆ ಕೊಟ್ಟ ಕೊನೆಯ ಮಾತನ್ನು ಉಳಿಸಿಕೊಳ್ಳಲು ಕೈಗೊಳ್ಳುವ ಅಸಾಧಾರಣ ಹೋರಾಟವೇ ‘ನನ್ನ ಪ್ರೀತಿಯ ರಾಮು’. ಇದು ಕೇವಲ ಪ್ರತೀಕಾರದ ಕಥೆಯಲ್ಲ — ಒಬ್ಬ ಸಾಮಾನ್ಯ ಮಗ ಇತಿಹಾಸವಾಗುವ ಕಥೆ.”